ಮೈಸೂರು/ಮಡಿಕೇರಿ : ಗುಂಪಿನೊಂದಿಗೆ ಬಂದ ಕಾಡಾನೆಯೊಂದು ಆಯತಪ್ಪಿ ಶೌಚಾಲಯಕ್ಕಾಗಿ ತೆಗೆದಿದ್ದ ಗುಂಡಿಗೆ ಬಿದ್ದು ಮೇಲೆ ಬರಲಾರದೆ ಕೆಲವು ಗಂಟೆಗಳವರೆಗೆ ಒದ್ದಾಡಿರುವ ಘಟನೆ ಮಡಿಕೇರಿ ಬಳಿಯ ನಾಪೋಕ್ಲು ಸಮೀಪದ ಕರಡ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಕೀಮಲೆಕಾಡು ಎಂಬ ಪ್ರದೇಶದ ತೋಟದಲ್ಲಿ ಗುಂಪಾಗಿ ಬಂದ ಆನೆಗಳಲ್ಲಿ ಹೆಣ್ಣು ಕಾಡಾನೆಯೊಂದು ಆಯತಪ್ಪಿ ಶೌಚಾಲಯಕ್ಕಾಗಿ ತೆಗೆದಿದ್ದ ಗುಂಡಿಯಲ್ಲಿ ಬಿದ್ದು ಮೇಲೆ ಏಳಲಾಗದೆ ಒದ್ದಾಡುತ್ತಿತ್ತು. ಇದನ್ನು ನೋಡಿದ ಗ್ರಾಮದ ನಿವಾಸಿಯೊಬ್ಬರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಪುನಃ ಕಾಡಾನೆ ಗುಂಪಿಗೆ ಆನೆಯನ್ನು ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ: ವಿಷಯ ತಿಳಿದು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬರುವ ವೇಳೆಗೆ ಆನೆ ಹರಸಾಹಸಪಟ್ಟು ಗುಂಡಿಯಿಂದ ಮೇಲೆದ್ದು ತೋಟದೊಳಗೆ ಹೋಗಿತ್ತು. ನಂತರ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಸಿಬ್ಬಂದಿ ಆ ಕಾಡಾನೆಯನ್ನು ಪುನಃ ಅದರ ಗುಂಪಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವರಾಮು ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : ಚಿಕ್ಕಮಗಳೂರು : ಕಾಡಾನೆ ದಾಳಿಗೆ ಯುವತಿ ಬಲಿ - ELEPHANT ATTACK