ಹೈದರಾಬಾದ್(ತೆಲಂಗಾಣ): ನಿದ್ರೆ ಗುಂಗಿನಲ್ಲಿದ್ದ ಚಾಲಕ ಓಡಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಮನೆಯೊಂದರ ಕಾಂಪೌಂಡ್ ಗೋಡೆ ಏರಿ ನಿಂತ ಘಟನೆ ಹೈದರಾಬಾದ್‌ನ ದುಂಡಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಶಂಭಿಪುರದಲ್ಲಿ ಗುರುವಾರ ರಾತ್ರಿ ನಡೆದಿದೆ. ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಕಾಂಪೌಂಡ್ ಗೋಡೆ ಏರಿ ನಿಂತಿದ್ದ ಕಾರನ್ನು ನೋಡಿ ಅಚ್ಚರಿಗೊಳಗಾದರು. ಚಾಲಕ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಸ್ಥಳೀಯರು, ಪೊಲೀಸರು ಸೇರಿ ಕಾರನ್ನು ಕ್ರೇನ್ ಸಹಾಯದಿಂದ ಕಾಂಪೌಂಡ್ ಗೋಡೆಯಿಂದ ಕೆಳಗಿಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಮಧ್ಯರಾತ್ರಿ 1 ಗಂಟೆಯ ಸಮಯದಲ್ಲಿ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆ ಕಡೆಯಿಂದ ಸಾಗುತ್ತಿದ್ದ ದಾರಿಹೋಕರು ಕಾಂಪೌಂಡ್ ಗೋಡೆ ಏರಿ ನಿಂತಿದ್ದ ಕಾರನ್ನು ಅಚ್ಚರಿ ವ್ಯಕ್ತಪಡಿಸಿ, ತಮ್ಮ ಮೊಬೈಲ್ ಫೋನ್‌ಗಳಲ್ಲಿ ಅದರ ವಿಡಿಯೋ ಮತ್ತು ಫೋಟೋ ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರಿಂದ ವೈರಲ್ ಆಗಿವೆ. ಇದಕ್ಕೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ: ಕೂದಲೆಳೆ ಅಂತರದಲ್ಲಿ ನಾಲ್ವರು ಪಾರು
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ ಹೊಡೆದ ಗೂಡ್ಸ್ ವಾಹನ! ಭಯಾನಕ ದೃಶ್ಯ