Surprise Me!

ಸಾಸ್ವೇಹಳ್ಳಿ ಏತ ನೀರಾವರಿಯ ಬೃಹತ್ ಗಾತ್ರದ ಪೈಪ್ ಒಡೆದು ಅವಾಂತರ, ಮನೆಗಳಿಗೆ ನುಗ್ಗಿದ ನೀರು

2025-07-26 114 Dailymotion

ದಾವಣಗೆರೆ: ತುಂಗಾ ನದಿಯಿಂದ ನೀರನ್ನು ಎತ್ತಿ ಹತ್ತಿರದ ಕೆರೆಗಳಿಗೆ ಹರಿಸುವ 'ಸಾಸ್ವೇಹಳ್ಳಿ ಏತ ನೀರಾವರಿ'ಯ ಬೃಹತ್ ಗಾತ್ತದ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ನಡೆದಿದೆ. ಎರಡು ಕಡೆಗಳಲ್ಲಿ ಪೈಪ್​ ಒಡೆದು ಬಾನೆತ್ತರಕ್ಕೆ ನೀರು ಚಿಮ್ಮುತ್ತಿದ್ದು, ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಅದೇ ಗ್ರಾಮದಲ್ಲೇ‌ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯ ನೀರು ಸರಬರಾಜು ಮಾಡುವ ಬೃಹತ್ ಗಾತ್ರದ ಪೈಪ್​ಗಳು ಹಾದು ಹೋಗಿವೆ. ಕಳಪೆ ಕಾಮಗಾರಿಯಿಂದಲೇ ಪೈಪ್​ಗಳು ಈ ರೀತಿ ಪದೇ ಪದೆ ಒಡೆದು ಹೋಗುತ್ತಿವೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಪೈಪ್​ಗಳು ಒಡೆದು ಹೋಗಿರುವುದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಪೈಪ್​ಗಳು ಒಡೆದ ರಭಸಕ್ಕೆ ನೀರು ನುಗ್ಗಿ ಎರಡ್ಮೂರು ಮನೆಗಳಿಗೆ ಹಾನಿಯಾಗಿದೆ. ಮನೆಯಲ್ಲಿದ್ದ ಕಂಪ್ಯೂಟರ್ ಸೇರಿದಂತೆ ಹಲವು ಬೆಲೆ ಬಾಳುವ ವಸ್ತುಗಳಿಗೆ ಹಾನಿಯಾಗಿವೆ. ಕೆಲ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಅಧಿಕಾರಿಗಳು ಕೂಡಲೇ ಒಡೆದುಹೋಗಿರುವ ಪೈಪ್​ಗಳನ್ನು​ ಸರಿಪಡಿಸಿ ನಮಗಾದ ನಷ್ಟವನ್ನು ತುಂಬಿಕೊಡಬೇಕು ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ. 

ಒಟ್ಟು 121 ಕೆರೆಗಳನ್ನು ತುಂಬಿಸುವ ಏತ ನೀರಾವರಿ ಇದಾಗಿದ್ದು, ದಾವಣಗೆರೆಯ ಹೊನ್ನಾಳಿ, ಶಿವಮೊಗ್ಗ ಗ್ರಾಮಾಂತರ ಪ್ರದೇಶ, ಚನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ ತಾಲೂಕು ಹಾಗೂ ಮಾಯಕೊಂಡ ಕೆರೆಗಳಿಗೆ ನೀರು ತುಂಬಿಸುವ 604 ಕೋಟಿ ವೆಚ್ಚದ ಪ್ರಮುಖ ಯೋಜನೆ ಆಗಿದೆ. 

ಇದನ್ನೂ ಓದಿ: ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು: ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ - ENCROACHMENT CLEARANCE