ಮೈಸೂರು: ತಾರಕ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಮಾಡಲಾಗಿದ್ದು, ನದಿ ಪಾತ್ರದಲ್ಲಿರುವ ಹೆಚ್.ಡಿ.ಕೋಟೆ ತಾಲೂಕಿನ ಹಲವು ರಸ್ತೆಗಳು ಜಲಾವೃತವಾಗಿವೆ. ಇದರಿಂದ, ಜನರು ಅಕ್ಕಪಕ್ಕದ ಗ್ರಾಮಗಳಿಗೆ ತೆರಳಲು ಪರದಾಟುವಂತಾಗಿದೆ.
ಅಲ್ಲದೆ, ಹಲವೆಡೆ ಮನೆಗಳು ಹಾಗೂ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕಟ್ಟೆಮನುಗನಹಳ್ಳಿ ಸೇತುವೆ ಮುಳುಗಿದ್ದು, ರಸ್ತೆ ಸಂಚಾರ ಬಂದ್ ಆಗಿದೆೆ. ಕಟ್ಟೆಮನುಗನಹಳ್ಳಿ, ಮೊತ್ತ, ಆಲತ್ತಾಳಹುಂಡಿ ಹಾಗೂ ಮೊತ್ತಹಾಡಿ ಸಂಪರ್ಕ ಕಡಿತಗೊಂಡಿದ್ದು, ಅಂತರಸಂತೆ ರಸ್ತೆ ಮಾರ್ಗದಲ್ಲಿ ಸುತ್ತುಹಾಕಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ನೀರಾವರಿ ನಿಗಮ ಇಲಾಖೆ ಅಧಿಕಾರಿಗಳು ಜು.23ರಂದು ಸಾರ್ವಜನಿಕರಿಗೆ ನೀರು ಬಿಡುಗಡೆ ಬಗ್ಗೆ ಪ್ರಕಟಣೆ ಮೂಲಕ ಮುನ್ನೆಚ್ಚರಿಕೆ ನೀಡಿದ್ದರು. "ತಾರಕ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿರುವುದರಿಂದ ಗರಿಷ್ಠ ಮಟ್ಟ ತಲುಪುವ ಹಂತದಲ್ಲಿದೆ. ಆದ್ದರಿಂದ ಜಲಾಶಯದಿಂದ ಯಾವುದೇ ಸಮಯದಲ್ಲಿ ಕ್ರಸ್ಟ್ ಗೇಟುಗಳ ಮೂಲಕ ನೀರನ್ನು ಹೊರಬಿಡುವ ಸಂಭವವಿದೆ. ಹೀಗಾಗಿ, ಸಾರ್ವಜನಿಕರು, ನದಿಯ ದಂಡೆಯ ಗ್ರಾಮ ವಾಸಿಗಳು ಹಾಗೂ ನದಿಪಾತ್ರದ ತಗ್ಗು ಪ್ರದೇಶದಲ್ಲಿ ಇರುವ ಆಸ್ತಿ ಪಾಸ್ತಿ, ಜನ ಜಾನುವಾರು ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳಬೇಕು" ಎಂದು ಹೆಚ್.ಡಿ.ಕೋಟೆ ಕಾವೇರಿ ನೀರಾವರಿ ನಿಗಮ ನಿಯಮಿತದ ತಾರಕ ನಾಲಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶೇಖರಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಹಾವೇರಿ: ಜೇನುಹೊಂಡ ಕೆರೆ ದಂಡೆ ಒಡೆದು ಜಮೀನಿಗೆ ನುಗ್ಗಿದ ನೀರು: ಅಪಾರ ಬೆಳೆ ನಾಶ