Surprise Me!

ಕಪಿಲಾ ಪ್ರವಾಹ: ನಂಜನಗೂಡಿನ ದೇವಾಲಯ, ಮಲ್ಲನ ಮೂಲೆ ಮಠ ಜಲಾವೃತ

2025-07-27 57 Dailymotion

ಮೈಸೂರು: ಕೇರಳದ ವಯನಾಡಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಕಬಿನಿ ಜಲಾಶಯದಿಂದ ಹೊರಹರಿವು ಹೆಚ್ಚಳವಾಗಿದೆ. ಕಪಿಲಾ ನದಿ ಪ್ರವಾಹದಿಂದಾಗಿ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರನಿಗೂ ಜಲ ದಿಗ್ಬಂಧನವಾಗಿದೆ. ಕಬಿನಿ ಹಾಗೂ ನುಗು ಜಲಾಶಯದಿಂದ ಒಟ್ಟಾರೆ 70 ಸಾವಿರ ಕ್ಯೂಸೆಕ್‌ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. 

ಇದರಿಂದಾಗಿ ಮಲ್ಲನ ಮೂಲೆ ಮಠ ಜಲಾವೃತವಾಗಿದೆ. ಪ್ರವಾಹದ ಹೆಚ್ಚಳದಿಂದಾಗಿ ನಂಜನಗೂಡು ನಗರದ ತೋಪಿನ ಬೀದಿ, ಸರಸ್ವತಿ ಕಾಲೋನಿ ಹಾಗೂ ಹಳ್ಳದ ಕೇರಿ ಬಡಾವಣೆಯಲ್ಲಿ ಮನೆಗಳು ಜಲಾವೃತಗೊಂಡಿವೆ. ಕಪಿಲಾ ನದಿಯ ಹದಿನಾರು ಕಾಲು ಮಂಟಪ ಮರದ ಭಾಗ ಮುಳುಗಡೆಯಾಗಿದೆ. 

ನಂಜುಂಡೇಶ್ವರ ಸ್ವಾಮಿಯ ದೇವಾಲಯದ ಕಪಿಲಾ ನದಿಯ ಸ್ನಾನ ಘಟ್ಟಗಳು, ಅಯ್ಯಪ್ಪ ಸ್ವಾಮಿ ದೇವಾಲಯ, ಪರಶುರಾಮ ದೇವಾಲಯ, ಶ್ರೀಕಂಠೇಶ್ವರ ಕಲ್ಯಾಣ ಮಂಟಪ, ಹಳ್ಳದ ಕೇರಿ, ದೇವಾಲಯದಲ್ಲಿರುವ ಅಂಗಡಿ ಮುಗ್ಗಟ್ಟುಗಳಿಗೂ ಕೂಡ ಪ್ರವಾಹದ ನೀರು ಹರಿದು ಸಂಪೂರ್ಣವಾಗಿ ಮುಳುಗಡೆಯಾಗಿದೆ. 

ಇನ್ನು ಸಾರ್ವಜನಿಕರಿಗೆ ಮತ್ತು ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಈಗಾಗಲೇ ತಾಲೂಕಿನ ಜನರು ತಂಡೋಪತಂಡವಾಗಿ ಆಗಮಿಸಿ ಕಪಿಲಾ ನದಿ ನೀರು ಹರಿಯುತ್ತಿರುವುದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿ ಕಟ್ಟೆಚ್ಚರ ವಹಿಸಿದ್ದಾರೆ.

ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ತುಂಗಭದ್ರಾ: ಶ್ರೀ ಕ್ಷೇತ್ರ ಉಕ್ಕಡಗಾತ್ರಿಗೆ ಜಲದಿಗ್ಬಂಧನ, ರಸ್ತೆ, ಸೇತುವೆಗಳು ಜಲಾವೃತ