ಹುಬ್ಬಳ್ಳಿ: ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಿಸುತ್ತಿದ್ದ ಎರಡು ಲಾರಿ, ಗುಜರಾತ್ ಮೂಲದ ನಾಲ್ವರು ವ್ಯಕ್ತಿಗಳು ಹಾಗೂ ಸುಮಾರು 49 ಟನ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದರು.
ಬೆಂಡಿಗೇರಿ ಠಾಣಾ ವ್ಯಾಪ್ತಿಯಲ್ಲಿ ಆಕ್ರಮ ಅಕ್ಕಿ ಸಾಗಣೆಯ ಬಗ್ಗೆ ಆಹಾರ ನಿರೀಕ್ಷಕ ಶಿವಪ್ಪ ಎನ್ನುವರು ನೀಡಿದ ದೂರಿನ ಮೇಲೆ ದಾಳಿ ಮಾಡಿ ಒಂದು ಲಾರಿಯಲ್ಲಿ 30 ಟನ್ ಹಾಗೂ ಇನ್ನೊಂದು ಲಾರಿಯಲ್ಲಿ 19 ಟನ್ ಸೇರಿದಂತೆ ಒಟ್ಟು 49 ಟನ್ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಹುಬ್ಬಳ್ಳಿ ದಕ್ಷಿಣ ಭಾಗದ ಹಾವೇರಿ ಸೇರಿದಂತೆ ಬೇರೆ ಬೇರೆ ತಾಲೂಕುಗಳಿಂದ ಅನ್ನ ಭಾಗ್ಯದ ಅಕ್ಕಿ ಸಂಗ್ರಹಿಸಿದ್ದರು. ಲಾರಿ ಹಾಗೂ ಲಾರಿ ಮಾಲೀಕರು ಗುಜರಾತ್ ಮೂಲದವರು. ಬಂಧಿತರು ಭರತ್ ಚೌಡಾ, ರಾಜು, ಚೌಡಾ, ಅಹ್ಮದಾಬಾಯಿ ವಕಾದಾರ, ಜಯರಾಂ ಉಗ್ರೆಜಾದಾ ಎಂದು ಗುರುತಿಸಲಾಗಿದೆ. ಇವರು ಎಲ್ಲಿಂದ ಇಷ್ಟೊಂದು ಪ್ರಮಾಣದ ಅಕ್ಕಿ ಸಂಗ್ರಹಿಸಿದರು. ಅವರಿಗೆ ಯಾರು ಕೊಟ್ಟರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕಮಿಷನರ್ ಹೇಳಿದರು.
ದೊಡ್ಡ ಪ್ರಮಾಣ ಅಕ್ಕಿ ಸಂಗ್ರಹದ ಹಿಂದೆ ದೊಡ್ಡ ಜಾಲವಿದೆ. ಅದನ್ನು ತನಿಖೆಯಿಂದ ಬಹಿರಂಗಪಡಿಸಲಾಗುವುದು. ಎಂತಹ ದೊಡ್ಡ ವ್ಯಕ್ತಿ ಇದರ ಹಿಂದೆ ಇದ್ದರೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಶಿಕುಮಾರ್ ಹೇಳಿದರು.
ಇದನ್ನೂ ಓದಿ: ಶಿರಸಿಯಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ: ಅಕ್ರಮ ಸಾಗಾಟದ ವೇಳೆ ಪೊಲೀಸ್ ದಾಳಿ, 40 ಕ್ವಿಂಟಾಲ್ ವಶ - ANNABHAGYA RICE